ಚೌಹಾಣರು -
ಕ್ರಿ.ಶ. 10-13ನೆಯ ಶತಮಾನಗಳಲ್ಲಿ ರಜಪುಟಾಣದ ಶಾಕಂಬರಿ, ರಣತಂಬೂರು, ನಾಡೋಲ್ ಮತ್ತು ಜಾಲೋಹರ್ (ಜಾಬಾಲಿಪುರ) ಪ್ರದೇಶಗಳಲ್ಲಿ ಆಳಿದ ಒಂದು ಮನೆತನದ ಮತ್ತು ಅದರ ಶಾಖೆಗಳ ರಾಜರು, ಚಾಹಮಾನರು ಎಂದೂ ಇವರನ್ನು ಕರೆಯಲಾಗಿದೆ. ಚಾರಣಕವಿಗಳ ಸಾಂಪ್ರದಾಯಿಕ ಹಾಡುಗಳಲ್ಲಿ ಚಾಹಮಾನರು ಮೂಲತಃ ನರ್ಮದಾ ನದೀ ತೀರದ ಮಾಹಿಷ್ಮತೀ ನಗರದಲ್ಲಿ ಆಳುತ್ತಿದ್ದರೆಂದು ಹೇಳಿದೆ. ಆದರೆ ಇದನ್ನು ನಂಬಲು ಹೆಚ್ಚಿನ ಆಧಾರಗಳಿಲ್ಲ. ಇವು ಶಾಕಂಬರೀ ಸರೋವರದ ಪ್ರದೇಶದಲ್ಲಿ (ಈಗಿನ ಜೈಪುರ) ಆಳುತ್ತಿದ್ದರೆಂಬ ನಂಬುಗೆ ವಿಚಾರಣೀಯ. ನಾಗಾವಲೋಕನೆಂಬ ಅರಸನ ಮಾಂಡಲಿಕನಾಗಿದ್ದ ಇಮ್ಮಡಿ ಭರ್ತೃವೃದ್ಧ ಹಾಗೂ ಅವನಿಗೂ ಹಿಂದಿನ ಐದು ತಲೆಮಾರಿನವರು ಭಡೋಚ ಜಿಲ್ಲೆಯ ಪ್ರದೇಶದಲ್ಲಿ ಆಳುತ್ತಿದ್ದಿರಬಹುದೆಂದು ಆ ಮಾಂಡಲಿಕನ ಶಾಸನದ ಆಧಾರದ ಮೇಲೆ ಊಹಿಸಲಾಗಿದೆ. ಅಲ್ಲಿ ಕೇವಲ ಮಾಂಡಲಿಕ ಪದವಿಯಲ್ಲಿದ್ದ ಅವರು ಅನಂತರ ಇತರ ಕಡೆಗಳಿಗೆ ವಲಸೆ ಹೋಗಿರಬಹುದು. ಸುಮಾರು 7ನೆಯ ಶತಮಾನದಲ್ಲಿ ಇವರು ಚಿತ್ತೋಡಿನಲ್ಲಿ ನೆಲಸಿದ್ದರೆಂದೂ ಮೂಲತಃ ತ್ವಷ್ಟ್ರಿ ಕುಲಕ್ಕೆ ಸೇರಿದ್ದ ಇವರು ಅನಂತರ ತಮ್ಮನ್ನು ಜಾಹಮಾನರೆಂದು ಕರೆದುಕೊಂಡರೆಂದೂ ಊಹಿಸಲಾಗಿದೆ. ಈ ಸಂತತಿಯ ಮೂಲಕ್ಕೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ಒಂದು ಐತಿಹ್ಯದ ಪ್ರಕಾರ ಸೂರ್ಯದೇವನ ಪುತ್ರನಾದ ಚಾಹಮಾನ ಮನೆತನ ಅಗ್ನಿಕುಲಕ್ಕೆ ಸಂಬಂಧಿಸಿದ ನಾಲ್ಕು ಮುಖ್ಯ ಸಂತತಿಗಳಲ್ಲೊಂದೆಂದೂ ಪ್ರತೀತಿ ಇತ್ತು.										(ಜಿ.ಆರ್.ಆರ್.)

	ಶಾಕಂಬರೀ ಶಾಖೆ : ಶಾಕಂಬರೀ ಶಾಖೆಯ ಚಾಹಮಾನರು ಈ ಮನೆತನದವರಲ್ಲಿ ಪ್ರಸಿದ್ಧರು. ಇವರು ಆಳಿದ ಪ್ರದೇಶವನ್ನು ಸಪಾದಲಕ್ಷ ಎಂದೂ ಕರೆಯಲಾಗಿದೆ. ಅದರಿಂದ ಇವರು ಸಪಾದಲಕ್ಷ ಚಾಹಮಾನರೆಂದೂ ಕರೆಯಲ್ಪಟ್ಟರು. ವಸುದೇವ ಈ ಅರಸರಲ್ಲಿ ಮೊದಲನೆಯವನು. ಇವನ ವಂಶದಲ್ಲಿ ಸಾಮಂತ, ಪೂರ್ಣತಲ್ಲ, ಜಯರಾಜ ಮತ್ತು 1ನೆಯ ವಿಗ್ರಹರಾಜರು ಅನುಕ್ರಮವಾಗಿ ಆಳಿದರು. ಪ್ರತೀಹಾರ ವತ್ಸರಾಜ ಬಂಗಾಲದ ಧರ್ಮಪಾಲನೊಡನೆ ಹೂಡಿದ್ದ ಕದನಗಳಲ್ಲಿ ಪ್ರತೀಹಾರನ ಪರವಾಗಿ ಚಾಹಮಾನ 1ನೆಯ ದುರ್ಲಭರಾಜ ಕಾದಿದ. ಅನಂತರ ಅವನ ಮಗ 1ನೆಯ ಗೋವಿಂದರಾಜ ಇಮ್ಮಡಿ ನಾಗಭಟನಿಗೆ ನೆರವಾಗಿ ಸಿಂಧ್‍ನಲ್ಲಿ ಅರಬರ ದಾಳಿಯನ್ನೆದುರಿಸಿ ಹಿಮ್ಮೆಟ್ಟಿಸಿದ. ಈ ಚಾಹಮಾನರು ಪ್ರತೀಹಾರರ ಸಾಮಂತರಾಗಿದ್ದು, ಅವರೊಡನೆ ರಕ್ತಸಂಬಂಧವನ್ನು ಸಹ ಬೆಳೆಸಿ, ಕ್ರಮೇಣ ಅವರ ಶಕ್ತಿ ಕುಗ್ಗಿದಾಗ ಪ್ರಬಲರಾದರು. ಇಮ್ಮಡಿ ಗೂವಕನ ಸೋದರಿಯಾದ ಕಲಾವತಿಯನ್ನು ಪ್ರತೀಹಾರ 1ನೆಯ ಬೋಜನಿಗೆ ಲಗ್ನಮಾಡಿಕೊಡಲಾಗಿತ್ತು. ಪ್ರತೀಹಾರ 1ನೆಯ ಮಹೀಪಾಲನ ಸಾಮಂತ 1ನೆಯ ವಾಕ್ವತಿರಾಜ. ಈತ ಪುಷ್ಕರ ಕ್ಷೇತ್ರದಲ್ಲಿ ಶಿವಾಲಯವೊಂದನ್ನು ಕಟ್ಟಿಸಿದ. ಈ ವೇಳೆಗಾಗಲೇ ಇವನ ಪೂರ್ವಜರು ಪುಷ್ಕರಕ್ಷೇತ್ರದಲ್ಲಿ ಕೆಲವು ವಲಯಗಳನ್ನೂ ಧಾರ್ಮಿಕ ಸಂಬಂಧವಾದ ಕಟ್ಟಡಗಳನ್ನೂ ಕಟ್ಟಿಸಿದ್ದರು. ವಾಕ್ಪತಿರಾಜನ ಮೂವರು ಮಕ್ಕಳಲ್ಲಿ ಕಿರಿಯನಾದ ಲಕ್ಷ್ಮಣ ದಕ್ಷಿಣ ಮಾರವಾಡದ ನಡ್ಡುಲದಲ್ಲಿ ಚಾಹಮಾನ ಶಾಖೆಯೊಂದರ ಮೂಲಪುರುಷನಾದ. ಇವನ ವಂಶಸ್ಥರು ಆ ಪ್ರದೇಶದಲ್ಲಿ ಕೆಲವು ಶತಮಾನಗಳ ಕಾಲ ಆಳಿದರು.

	ವಾಕ್ಪತಿರಾಜನ ಹಿರಿಯ ಮಗನಾದ ಸಿಂಹರಾಜ ಮಹಾರಾಜಾಧಿರಾಜನೆನಿಸಿಕೊಂಡ. ಪ್ರತೀಹಾರರು ಈ ವೇಳೆಗೆ ಅವನತಿಯ ಹಾದಿಯಲ್ಲಿದ್ದರು. ಅವರ ಅನೇಕ ಸಾಮಂತರನ್ನು ಈತ ಸೋಲಿಸಿದ. ಈತನ ಮಗ ಇಮ್ಮಡಿ ವಿಗ್ರಹರಾಜ ಗುಜರಾತಿನ ಚೌಳುಕ್ಯ ಮೂಲರಾಜನನ್ನು ಸೋಲಿಸಿ ತನ್ನ ಸೈನ್ಯವನ್ನು ನರ್ಮದಾ ತೀರದವರೆಗೂ ಒಯ್ದ. ಈತನ ಸೋದರ ದುರ್ಲಭರಾಜ ನಡ್ಡುಲದಲ್ಲಿ ಆಳುತ್ತಿದ್ದ ಚಾಹಮಾನ ಮಹೇಂದ್ರನನ್ನು ಸೋಲಿಸಿದ. ಹತ್ತನೆಯ ಶತಮಾನದ ಅಂತಿಮ ವರ್ಷಗಳಲ್ಲಿ ಶಾಕಂಬರೀ ಚಾಹಮಾನರ ರಾಜ್ಯ ಉತ್ತರದಲ್ಲಿ ಸಕರ್, ಪೂರ್ವಕ್ಕೆ ಜೈಪುರ, ದಕ್ಷಿಣದಲ್ಲಿ ಅಜ್ಮೀರದ ಸಮೀಪದ ಪುಷ್ಕರ ಹಾಗೂ ಪಶ್ಚಿಮದಲ್ಲಿ ಜೋಧಪುರ ಇವುಗಳ ನಡುವಣ ಪ್ರದೇಶವನ್ನು ಒಳಗೊಂಡಿತ್ತು.

	ದುರ್ಲಭರಾಜನ ಮಗ ಇಮ್ಮಡಿ ಗೋವಿಂದರಾಜ ಘಜ್ನಿ ಮಹಮೂದನ ದಾಳಿಯನ್ನೆದುರಿಸಬೇಕಾಯಿತಾದರೂ ಇದರಿಂದ ಅವನಿಗೆ ಹಾನಿಯೇನೂ ಆಗಲಿಲ್ಲ. ನಾಡೋಲದ ಚಾಹಮಾನ ಅಣಹಿಲ್ಲ ಶಾಕಂಬರಿಯ ವೀರ್ಯರಾಜನನ್ನು ಸೋಲಿಸಿದ. ಪರಮಾರ ಭೋಜನೊಡನೆ ನಡೆದ ಕದನದಲ್ಲಿ ವೀರ್ಯರಾಜ ತೀರಿಕೊಂಡ. ಹನ್ನೆರಡನೆಯ ಶತಮಾನದ ಮೊದಲ ದಶಕದಲ್ಲಿ ಆಳುತ್ತಿದ್ದ. ಪೃಥ್ವೀರಾಜ ಪುಷ್ಕರ ಕ್ಷೇತ್ರದಲ್ಲಿಯ ಬ್ರಾಹ್ಮಣರನ್ನು ಸುಲಿಗೆ ಮಾಡಲು ಬಂದ 700 ಜನ ಚೌಳುಕ್ಯರನ್ನು ಕೊಂದನಂತೆ. ಈತ ಹಾಗೂ ಈತನ ಮಗ ಅಜಯರಾಜ ಇವರು ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ಸ್ಥಾಪನೆಗಾಗಿ ಶ್ರಮಿಸಿದರು. ಅಜಯರಾಜ ಉಜ್ಜಯಿನಿಯನ್ನು ಮುತ್ತಿ ಬಾಚಿಗ, ಸಿಂಧುಲ ಮತ್ತು ಯಶೋರಾಜರೆಂಬ ಅರಸರನ್ನು ಕೊಂದ. ಈತನೇ ಅಜ್ಮೀರ್ ನಗರದ ಸ್ಥಾಪಕ. ಅದರ ಮೂಲ ಹೆಸರು ಅಜಯಮೇಡು.

	ಅನಂತರ ಬಂದ ಅರ್ಣೋರಾಜ ಚೌಳುಕ್ಯ ಜಯಸಿಂಹ ಹಾಗೂ ಕುಮಾರಪಾಲರಿಂದ ಸೋಲಿಸಲ್ಪಟ್ಟು, ಜಯಸಿಂಹನ ಮಗಳಾದ ಕಾಂಚನದೇವಿಯನ್ನು ಮದುವೆಯಾಗಿ ತನ್ನ ಮಗಳಾದ ಜಲ್ಹಣಾಳನ್ನು ಕುಮಾರಪಾಲನಿಗೆ ಮದುವೆಮಾಡಿಕೊಟ್ಟ. 1153ರ ಸುಮಾರಿಗೆ ಆಳಲು ಬಂದ 4ನೆಯ ವಿಗ್ರಹರಾಜ ಅಥವಾ ವೀಸಲದೇವ ದೆಹಲಿಯ (ಢಿಲ್ಲಿಕಾ)ವರೆಗೂ ಸೈನ್ಯವನ್ನೊಯ್ದು ಪಂಜಾಬಿನ ಹಿಸ್ಸಾರ್ ಜಿಲ್ಲೆಯ ಆಶಿಕೌ (ಹಾನ್ಸಿ) ನಗರವನ್ನು ವಶಪಡಿಸಿಕೊಂಡ. ಚೌಳುಕ್ಯರಿಗೆ ಸೇರಿದ್ದ ಪಲ್ಲಿಕಾ (ಜೋಧಪುರದ ಪಾಲ), ಜಾಬಾಲಿಪುರ (ಜಾಲೋರ್) ಮತ್ತು ನಾಡೋಲ್ ನಗರಗಳನ್ನು ಸೂರೆಗೊಂಡ. ಈತ ಸಾಹಿತಿಯೂ ಆಗಿದ್ದ ಈತನ ಹರಕೇಲೀ ನಾಟಕದ ಕೆಲವು ಭಾಗಗಳು ಅಜ್ಮೀರದಲ್ಲಿ ಹಲವು ಶಿಲೆಗಳ ಮೇಲೂ ಮಹಾಕವಿ ಎನಿಸಿದ ಸೋಮದೇವನ ಲಲಿತವಿಗ್ರಹರಾಜ ನಾಟಕದ ಭಾಗಗಳು ಅಜ್ಮೀರದ ಮಸೀದಿಯೊಂದರ ಕಲ್ಲುಗಳ ಮೇಲೂ ಕೊರೆಯಲ್ಪಟ್ಟಿವೆ. ಇವೆರಡೂ ಭಾಗಶಃ ದೊರೆತಿವೆ. ಹಲವಾರು ಬಾರಿ ಮ್ಲೇಚ್ಛರನ್ನು ಸೋಲಿಸಿ ಆರ್ಯಾವರ್ತವನ್ನು ಕಾಪಾಡಿದನೆಂಬ, ಈತನನ್ನು ಕುರಿತ, ವರ್ಣನೆ ಉತ್ಪ್ರೇಕ್ಷೆಯಲ್ಲ.

	ಇಮ್ಮಡಿ ಪೃಥ್ವೀರಾಜ ಆಳುತ್ತಿದ್ದಾಗ ಆತನ ಸೋದರಮಾವನ ಅರ್ಣೋರಾಜನ ಮಗ ಸೋಮೇಶ್ವರ, ಮಾತಾಮಹರಾದ ಚೌಳುಕ್ಯರ ಆಶ್ರಯದಲ್ಲಿ ಗುಜರಾತಿನಲ್ಲಿ ನೆಲೆಸಿದ್ದರು. ಚೌಳುಕ್ಯ ಕುಮಾರಪಾಲ ಕೊಂಕಣದ ಶಿಲಾಹಾರ ಮಲ್ಲಿಕಾರ್ಜುನನ ವಿರುದ್ಧ ದಂಡೆತ್ತಿದಾಗ ಆತನಿಗೆ ನೆರವಾಗಿದ್ದ. ಕಳಚುರಿ ರಾಜಕುಮಾರಿ ಕರ್ಪೂರದೇವಿಯನ್ನು ಮದುವೆಯಾದ. ಆಕೆಯಲ್ಲಿ ಜನಿಸಿದವನೇ ಖ್ಯಾತಿವೆತ್ತ ಮುಮ್ಮಡಿ ಪೃಥ್ವೀರಾಜ. ಇಮ್ಮಡಿ ಪೃಥ್ವೀರಾಜನ ಮರಣಾನಂತರ ಆತನ ಮಂತ್ರಿಗಳಿತ್ತ ಆಹ್ವಾನವನ್ನು ಮನ್ನಿಸಿ ಸೋಮೇಶ್ವರನೂ ಸಪಾದಲಕ್ಷಕ್ಕೆ ಬಂದು ಸ್ವಲ್ಪ ಕಾಲ ರಾಜ್ಯವಾಳಿದ. 1177ರಲ್ಲಿ ಮುಮ್ಮಡಿ ಪೃಥ್ವೀರಾಜನ ಆಳ್ವಿಕೆ ಆರಂಭವಾಯಿತು.									(ಜಿ.ಬಿ.ಆರ್.)

	ಮೂರನೆಯ ಪೃಥ್ವೀರಾಜ ಚಾಹಮಾನ ಸಂತತಿಯ ಅರಸರಲ್ಲಿ ಅತ್ಯಂತ ಪ್ರಸಿದ್ಧನಾದವನು. ಇವನ ವ್ಯಕ್ತಿತ್ವ ಮತ್ತು ಸಾಧನೆಯ ವರ್ಣನೆಗಳು ಚಾಂದ್‍ಬರ್ದಾಯಿಯ ಪೃಥ್ವೀರಾಜನ ರಾಸೋ, ಜಯಾನಕನ ಪೃಥ್ವೀರಾಜ, ಜಿನಪಾಲನ ಖರತರ ಗಚ್ಚ ಪಟ್ಟಾವಳೀ ಹಮ್ಮೀರ ಮಹಾಕಾವ್ಯ ಮುಂತಾದ ಗ್ರಂಥಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಮುಸ್ಲಿಮರ ಆಡಳಿತ ಸ್ಥಾಪನೆಯನ್ನು ಕುರಿತು ಬರೆದಿರುವ ಫೆರಿಸ್ತನ ಗ್ರಂಥದಲ್ಲೂ ಪೃಥ್ವೀರಾಜನಿಗೆ ಸಂಬಂದಿಸಿದ ವರ್ಣನೆಗಳಿವೆ. ಪೃಥ್ವೀರಾಜನ ಅನೇಕ ಶಾಸನಗಳೂ ಅವನು ಅಚ್ಚು ಹಾಕಿಸಿದ ಬೆಳ್ಳಿಯ ನಾಣ್ಯಗಳೂ ದೊರೆತಿವೆ.

	ಕಾವ್ಯಗಳಿಂದ ಜನಪ್ರಿಯವಾಗಿರುವ, ಪೃಥ್ವೀರಾಜನಿಗೆ ಸಂಬಂಧಿಸಿದ ಒಂದು ಘಟನೆ ಸಂಯೋಗಿತಾ (ಸಂಯುಕ್ತಾ) ಸ್ವಯಂವರ. ಕನೌಜಿನ ರಾಜ ಜಯಚಂದ್ರನಿಗೂ ಪೃಥ್ವೀರಾಜನಿಗೂ ವೈಮನಸ್ಯವಿತ್ತು. ಜಯಚಂದ್ರ ತನ್ನ ಕುಮಾರಿ ಸಂಯೋಗಿತಾಳ ಸ್ವಯಂವರನ್ನೇರ್ಪಡಿಸಿದ. ಸಂಯೋಗಿತೆ ಪೃಥ್ವೀರಾಜನ ಧೈರ್ಯ ಸಾಹಸಗಳನ್ನು ಕೇಳಿ ಅವನನ್ನು ವರಿಸಲು ನಿರ್ಧರಿಸಿದ್ದಳು. ಗೂಢಚಾರರ ಮೂಲಕ ತನ್ನ ನಿರ್ಧಾರವನ್ನು ಪೃಥ್ವೀರಾಜನಿಗೆ ಮುಟ್ಟಿಸಿದ್ದಳು. ಆದರೆ ಜಯಚಂದ್ರ ಪೃಥ್ವೀರಾಜನಿಗೆ ಆಹ್ವಾನವನ್ನು ಕಳಿಸಲಿಲ್ಲ. ಪ್ರತಿಯಾಗಿ, ನೆರೆದ ರಾಜಕುಮಾರರ ಮುಂದೆ ಅವನನ್ನು ಅಪಮಾನಕ್ಕೀಡುಮಾಡಲು ಪೃಥ್ವೀರಾಜನ ಲೋಹದ ವಿಗ್ರಹವನ್ನು ಮಾಡಿಸಿ ಅದನ್ನು ಅರಮನೆಯ ದ್ವಾರದ ಬಳಿ ಇಡಿಸಿದ್ದ. ಸಂಯೋಗಿತೆ ಅಲ್ಲಿ ನೆರದಿದ್ದ ರಾಜರನ್ನೆಲ್ಲ ಕಡೆಗಣಿಸಿ ದ್ವಾರದ ಬಳಿಗೆ ನಡೆದುಬಂದು ಪೃಥ್ವೀರಾಜನ ಪ್ರತಿಮೆಗೆ ಹೂಮಾಲೆ ಹಾಕಿದಳು. ಮೊದಲೇ ಗೊತ್ತುಪಡಿಸಿಕೊಂಡಿದ್ದಂತೆ ಆ ವೇಳೆಗೆ ಅಲ್ಲಿಗೆ ಬಂದು ಅಡಗಿಕೊಂಡಿದ್ದ ಪೃಥ್ವೀರಾಜ ಸಂಯುಕ್ತೆಯನ್ನು ಸ್ವೀಕರಿಸಿ ಕುದುರೆಯ ಮೇಲೆ ಕೂರಸಿಕೊಂಡು ಹೊರಟ. ಜಯಚಂದ್ರನ ಸೈನಿಕರು ಪೃಥ್ವೀರಾಜನನ್ನು ಅಟ್ಟಿಸಿಕೊಂಡು ಹೋದರು. ಆದರೆ ವೇಷಮರೆಸಿಕೊಂಡು ಅಲ್ಲಿಗೆ ಬಂದಿದ್ದ ಪೃಥ್ವೀರಾಜನ ಬೆಂಗಾವಲು ಪಡೆ ಜಯಚಂದ್ರನ ಸೈನಿಕರನ್ನು ತಡೆದು ಪರಾಭವಗೊಳಿಸಿತು. ಪೃಥ್ವೀರಾಜ ರಾಸೋ ಗ್ರಂಥದಲ್ಲಿ ವರ್ಣಿತವಾಗಿರುವ ಈ ಘಟನೆ ಐತಿಹಾಸಿಕ ಸಂಗತಿಯಾಗಿರಲಾರದೆಂದು ಹಲವು ವಿದ್ವಾಂಸರು ಸಂದೇಹ ವ್ಯಕ್ತಪಡಿಸಿದ್ದಾರೆ.

	ಆದರೆ ಪೃಥ್ವೀರಾಜ ಸಾಹಸಿಯಾಗಿದ್ದನೆಂಬುದರಲ್ಲಿ ಸಂಶಯವಿಲ್ಲ. ಒಳ್ಳೆಯ ಯೋಧರೂ ಯುದ್ಧ ತಂತ್ರಜ್ಞರೂ ಆದ ಕದಂಬವಾಸಿ, ಭುವನೈಕಮಲ್ಲ, ಸ್ಕಂದ, ವಾಮನ, ಉದಯರಾಜ, ಸೋಮೇಶ್ವರ ಎಂಬುವರನ್ನು ಮಂತ್ರಿ ಮತ್ತು ದಂಡ ನಾಯಕರುಗಳಾಗಿ ಪೃಥ್ವೀರಾಜ ನೇಮಿಸಿಕೊಂಡಿದ್ದ. ಅವನು ಅನೇಕ ಯುದ್ಧಗಳಲ್ಲಿ ತನ್ನ ನೆರೆರಾಜ್ಯಗಳ ರಾಜರನ್ನು ಸೋಲಿಸಿದ. ಚಂದೇಲ ರಾಜನನ್ನು ಸೋಲಿಸಿ, ಬುಂದೇಲಖಂಡದ ಹಲವು ಭಾಗಗಳನ್ನು ಆಕ್ರಮಿಸಿದ. ಗುಜರಾತಿನ ಚೌಳುಕ್ಯ 2ನೆಯ ಭೀಮನನ್ನು ಪರಾಭವಗೊಳಿಸಿದ. ಸಗೋತ್ರನೂ ಗೂಡಪುರದ ರಾಜನೂ ಆದ ನಾಗಾರ್ಜುನ ಎಂಬುವನು ದಂಗೆಯೆದ್ದಾಗ ಪೃಥ್ವೀರಾಜ ಅವನನ್ನು ನಿರ್ನಾಮ ಮಾಡಿ ಅವನು ಆಳುತ್ತಿದ್ದ ಪ್ರದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಪೃಥ್ವೀರಾಜನ ರಾಜ್ಯ ಪಾಟಿಯಾಲದ ಸಿರ್ಹಿಂದ್ ಮತ್ತು ದೆಹಲಿ ಪ್ರದೇಶದಿಂದ ದಕ್ಷಿಣದಲ್ಲಿ ಮೇವಾರದವರೆಗೂ ವಿಸ್ತರಿಸಿತು.
	1186ರ ವೇಳೆಗೆ ಘಜ್ನಿಯ ಯಾಮನಿ ಸಂತತಿಯನ್ನು ಕೊನೆಗಾಣಿಸಿ ಷಿಹಾಬುದ್ದೀನ್ ಮಹಮ್ಮದ ತನ್ನ ಆಳ್ವಿಕೆಯನ್ನು ಸ್ಥಾಪಿಸಿದ. ಅವನು ಪಶ್ಚಿಮ ಪಂಜಾಬನ್ನು ಆಕ್ರಮಿಸಿ ಚಾಹಮಾನ ರಾಜ್ಯದ ಸಿರ್ಹಿಂದನ್ನು ವಶಪಡಿಸಿಕೊಂಡು ತನ್ನ ಸೈನ್ಯಾಧಿಕಾರಿಗಳಲ್ಲೊಬ್ಬನಾದ ಮಲ್ಲಿಕ್ ಜಿಯಾವುದ್ದೀನ್ ಎಂಬುವನನ್ನು ಪ್ರಾಂತ್ಯಾಧಿಕಾರಿಯಾಗಿ ಮುಲ್ತಾನಿನಲ್ಲಿ ನೆಲೆಗೊಳಿಸಿದ. ಕೂಡಲೇ ಮಹಮದೀಯರ ಅಧಿಕಾರವನ್ನು ಪಂಜಾಬಿನಿಂದ ಕಿತ್ತೊಗೆಯಲು ಪೃಥ್ವೀರಾಜ ನಿರ್ಧರಿಸಿ ಸೈನ್ಯ ಸಮೇತನಾಗಿ ಹೊರಟ. ಈ ವಿಷಯವನ್ನು ತಿಳಿದ ಘೋರಿ ಮಹಮ್ಮದ ಸೈನ್ಯಸಮೇತನಾಗಿ ಮುನ್ನಡೆದ. ಎರಡೂ ಸೈನ್ಯಗಳು ಕನೌಜಿನಿಂದ 14 ಮೈ. ದೂರದಲ್ಲಿರುವ ತರೈನ್ ಮೈದಾನದಲ್ಲಿ 1190-1191ರಲ್ಲಿ ಪರಸ್ಪರ ಎದುರಾದುವು. ಯುದ್ಧದಲ್ಲಿ ಘೋರಿ ಮಹಮ್ಮದ ಸೋಲನ್ನುಭವಿಸಿದ, ಪೃಥ್ವೀರಾಜನ ದಂಡನಾಯಕರಲ್ಲೊಬ್ಬನಾದ ಗೋವಿಂದರಾಜನಿಂದ ಪೆಟ್ಟು ತಿಂದು ಮಹಮ್ಮದ ತನ್ನ ಅಂಗರಕ್ಷಕರ ಸಹಾಯದಿಂದ ರಣಾಂಗಣದಿಂದ ಪಾರಾದ. ಪೃಥ್ವೀರಾಜನ ಮತ್ತೊಬ್ಬ ದಳಪತಿಯಾದ ಸ್ಕಂದ ವೀರಾವೇಶದಿಂದ ಹೋರಾಡಿ ಮಹಮ್ಮದನ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದ. ಚಾಹಮಾನರ ಅಧಿಕಾರ ಪಂಜಾಬಿನ ಮೇಲೆ ಪುನಃ ಸ್ಥಾಪಿಸಲ್ಪಟ್ಟಿತು. ಮಲ್ಲಿಕ್ ಜಿಯಾವುದ್ದೀನ ತಬರ್‍ಹಿಂದ್‍ನಲ್ಲಿ ಸೋತು ಓಡಿ ಹೋದ.

	ಘೋರಿ ಮಹಮ್ಮದ ಸೋಲಿಗೆ ಸೇಡನ್ನು ತೀರಿಸಿಕೊಳ್ಳಲು ಹಿರಿದಾದ ಸೈನ್ಯವನ್ನು ಸಜ್ಜುಗೊಳಿಸಿ ಮಾರನೆಯ ವರ್ಷ (1192) ಪಂಜಾಬನ್ನು ಆಕ್ರಮಿಸಿ ಸಿರ್ಹಿಂದ್ ಪ್ರದೇಶವನ್ನು ವಶಪಡಿಸಿಕೊಂಡು ಪೃಥ್ವೀರಾಜ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ದೂತನ ಮುಖಾಂತರ ಹೇಳಿಕಳುಹಿಸಿದ. ಕುಪಿತನಾದ ಪೃಥ್ವೀರಾಜ ದೊಡ್ಡ ಸೈನ್ಯದೊಡನೆ ಶತ್ರುವನ್ನು ಎದುರಿಸಲು ಹೊರಟ. ಅನೇಕ ಸಣ್ಣ ಪುಟ್ಟ ರಾಜರು ಪೃಥ್ವೀರಾಜನಿಗೆ ನೆರವಾಗಿ ಯುದ್ಧಕ್ಕೆ ಮುಂದಾದರು. ಪುನಃ ತರೈನ್ ಮೈದಾನದಲ್ಲಿ ಯುದ್ಧ ಸಂಭವಿಸಿತು. ಸಂಧಾನಕ್ಕೆ ಒಡಂಬಟ್ಟವನಂತೆ ನಟಿಸಿ ಮಹಮ್ಮದ ಪೃಥ್ವೀರಾಜನನ್ನು ವಂಚಿಸಲು ಪ್ರಯತ್ನಿಸಿ ವಿಫಲನಾದ. ಕೊನೆಗೆ ತನ್ನ ಅಸಂಖ್ಯಾತ ಸೈನ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ನಾಲ್ಕು ಕಡೆಗಳಿಂದಲೂ ಪೃಥ್ವೀರಾಜನ ಸೈನ್ಯವನ್ನು ಸುತ್ತುವರಿದ. ಚಾಹಮಾನ ರಾಜನ ಸೈನಿಕರು ಇಡೀ ದಿನ ನಿರಂತರ ಹೋರಾಟದಿಂದ ಬಳಲಿದ್ದರು. ಗೊಂದಲಮಯ ಪರಿಸ್ಥಿತಿಯುಂಟಾಯಿತು. ಸಾವಿರಾರು ಸೈನಿಕರು ಹತರಾದರು. ರಣವೀರನಾದ ಗೋವಿಂದರಾಜ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಮಡಿದು ಬಿದ್ದ. ಪೃಥ್ವೀರಾಜ ಸೆರೆಸಿಕ್ಕಿದ. ಮಹಮ್ಮದ್ ಪೃಥ್ವೀರಾಜನಿಗೆ ಪ್ರಾಣದಾನ ಮಾಡಿ ಅಜ್ಮೀರ್ ನಗರವನ್ನು ಹೊಕ್ಕು ಅಲ್ಲಿಯ ದೇವಾಲಯಗಳನ್ನು ನಾಶಮಾಡಿದ. ಪೃಥ್ವೀರಾಜ ಮಹಮ್ಮದನನ್ನು ಸೋಲಿಸಲು ಸಂಚು ನಡೆಸಿದನೆಂಬ ಕಾರಣದಿಂದ ವಧಿಸಲ್ಪಟ್ಟ. ತರೈನ್ ಯುದ್ಧದ ಪರಿಣಾಮದಿಂದಾಗಿ ಚಾಹಮನರ ಯಶಸ್ವೀ ಪ್ರಭುತ್ವ ಕೊನೆಗೊಂಡಿತು. ಪೃಥ್ವೀರಾಜನ ಉತ್ತರಾಧಿಕಾರಿಯಾಗಿ ಅಜ್ಮೀರಿನಲ್ಲಿ ಅವನ ಮಗನಿಗೆ ಸಿಂಹಾಸನ ವಹಿದ್ದಾಗ್ಯೂ ಕೆಲವೇ ವರ್ಷಗಳಲ್ಲಿ ಅಲ್ಲಿ ಚಾಹಮಾನರ ಆಳ್ವಿಕೆ ಕೊನೆಗೊಂಡಿತು. ಅಜ್ಮೀರ್ ದೆಹಲಿಯಲ್ಲಿ ಮಹಮ್ಮದನ ಪ್ರಾಂತ್ಯಾಧಿಕಾರಿಯಾಗಿದ್ದ ಕುತ್ಬ್ ಉದ್ ದೀನನ ವಶವಾಯಿತು. ಪೃಥ್ವೀರಾಜನ ವಂಶಸ್ಥರು ರಣತಂಬೂರಿನಲ್ಲಿ ಅಲ್ಲಾವುದ್ಧೀನ್ ಖಲ್ಜಿಯ ಆಳ್ವಿಕೆಯವರೆಗೂ ಆಡಳಿತ ನಡೆಸಿದರು.

	ರಣತಂಬೂರು ಶಾಖೆ : ಮೂರನೆಯ ಪೃಥ್ವೀರಾಜನ ಮಗನಾದ ಗೋವಿಂದ ರಣತಂಬೂರು ಚೌಹಾಣ ಶಾಖೆಯ ಸ್ಥಾಪಕ. ಅವನು ಕುತ್ಬ್-ಉದ್-ದೀನನಿಗೆ ಹೇರಳವಾದ ಧನಕನಕವನ್ನು ಕೊಟ್ಟು ರಣತಂಬೂರಿನಲ್ಲಿ ತನ್ನ ಅಧಿಕಾರ ಸ್ಥಾಪಿಸಿದ ಪರಾಕ್ರಮಿಯಾದರೂ ಹೇಡಿಯಂತೆ ಮುಸ್ಲಿಮರ ಪ್ರಭುತ್ವದ ಆಶ್ರಯದಲ್ಲಿ ಗೋವಿಂದ ಬದುಕಬಯಸಿದ್ದರಿಂದ ಅವನನ್ನು ಕೊನೆಗಾಣಿಸಲು ಪೃಥ್ವೀರಾಜನ ತಮ್ಮನಾದ ಹರಿರಾಜ ಪ್ರಯತ್ನಪಟ್ಟು ವಿಫಲನಾದ. ಗೋವಿಂದನ ಅನಂತರ ವಾಲ್ಹಣದೇವ, ಪ್ರಹ್ಲಾದನ ಮತ್ತು ವೀರನಾರಾಯಣ ಎಂಬುವರು ಕ್ರಮವಾಗಿ ಆಳಿದರು. ದೆಹಲಿ ಸುಲ್ತಾನ ಅಲ್ತಮಷ್ ರಣತಂಬೂರನ್ನು ಆಕ್ರಮಿಸಲು ಪ್ರಯತ್ನ ಪಟ್ಟ. ಆದರೆ ಪರಾಕ್ರಮಿಯಾದ ವೀರನಾರಾಯಣ ಮಹಮ್ಮದೀಯರ ದಾಳಿಗಳನ್ನು ಶೌರ್ಯದಿಂದ ಎದುರಿಸಿ ಹಿಮ್ಮೆಟ್ಟಿಸಿದ. ಅನಂತರ ಅಲ್ತಮಷ್ ಗೌರವದಿಂದ ವೀರನಾರಾಯಣನನ್ನು ದೆಹಲಿಗೆ ಬರಮಾಡಿಕೊಂಡು ಮೋಸದಿಂದ ಕೊಲ್ಲಿಸಿ ರಣತಂಬೂರನ್ನು ಆಕ್ರಮಿಸಿದ. ಅಲ್ತಮಷನ ಮರಣಾನಂತರ 1236ರಲ್ಲಿ ವೀರನಾರಾಯಣನ ಸೋದರಸಂಬಂಧಿಯಾದ ವಾಗ್ಬಟನ ಮರಣಾನಂತರ ಅವನ ಮಗನಾದ ಜೈತೃಸಿಂಹ ರಾಜನಾದ. ಜೈತೃಸಿಂಹ ಮುಸ್ಲಿಂ ದಾಳಿಗಳಿಂದ ರಣತಂಬೂರು ರಾಜ್ಯವನ್ನು ಸಂರಕ್ಷಿಸಿದ. ಜೈತೃಸಿಂಹನ ಮರಣಾನಂತರ ಅವನ ಮಗನಾದ ಹಮ್ಮೀರ ರಾಜನಾದ.  

	ಹಮ್ಮೀರ ರಣತಂಬೂರಿನ ರಾಜರಲ್ಲೆಲ್ಲ ಅತ್ಯಂತ ಪರಾಕ್ರಮಿ ಎಂದು ಪ್ರಸಿದ್ಧನಾಗಿದ್ದಾನೆ. ಅಮೀರ್ ಖುಸ್ರು, ಜಿಯಾವುದ್ದೀನ್, ಬರನಿ ಮೊದಲಾದ ಮುಸ್ಲಿಂ ಲೇಖಕರು ಹಮ್ಮೀರ ಮತ್ತು ಅಲ್ಲಾವುದ್ದೀನ್ ಖಿಲ್ಜಿಯ ನಡುವೆ ನಡೆದ ಯುದ್ಧಗಳನ್ನು ವರ್ಣಿಸಿದ್ದಾರೆ. ಜೋಧರಾಜನ ಹಮ್ಮೀರ ರಾಸೋ ಮತ್ತು ಚಂದ್ರಶೇಖರನ ಹಮ್ಮೀರ ಹಾಥ ಹಿಂದೀ ಗ್ರಂಥಗಳಲ್ಲೂ ಹಮ್ಮೀರನಿಗೆ ಸಂಬಂಧಿಸಿದ ವರ್ಣನೆಗಳಿವೆ. ಹಮ್ಮೀರ ಉಜ್ಜಯಿನಿ, ಧಾರ, ಚಿತ್ತೂರು, ಆಬು, ತ್ರಿಭುವನಗಿರಿ ಮೊದಲಾದ ಪ್ರದೇಶಗಳ ರಾಜರನ್ನು 1288ರ ವೇಳೆಗೆ ಸೋಲಿಸಿ ತನ್ನ ಪುರೋಹಿತನಾದ ವಿಶ್ವರೂಪ ಎಂಬುವನ ಸಲಹೆಯ ಮೇರೆಗೆ ಕೋಟಿ ಯಜ್ಞವನ್ನು ಆಚರಿಸಿದ. 1292ರ ವೇಳೆಗೆ ದೆಹಲಿ ಸುಲ್ತಾನನಾಗಿದ್ದ ಜಲಾಲುದ್ದೀನ ಹಮ್ಮೀರನ ಪ್ರತಾಪವನ್ನಡಗಿಸಲು ಎರಡು ಸಾರಿ ರಣತಂಬೂರನ್ನು ಮುತ್ತಲು ಸೈನ್ಯ ಕಳುಹಿಸಿದ. ಆದರೆ ಅವನ ಪ್ರಯತ್ನ ಫಲಪ್ರದವಾಗಲಿಲ್ಲ. 1296ರಲ್ಲಿ ಅಲ್ಲಾವುದ್ಧೀನ್ ಖಿಲ್ಜಿ ದೆಹಲಿಯ ಸುಲ್ತಾನನಾಗಿ ರಾಜ್ಯವಿಸ್ತರಣೆಗೆ ತೊಡಗಿದ. ರಣತಂಬೂರನ್ನು ವಶಪಡಿಸಿಕೊಳ್ಳಲು ಅಲ್ಲಾವದ್ಧೀನ್ ಉಲ್ಗುಖಾನನ ನಾಯಕತ್ವದಲ್ಲಿ ದೊಡ್ಡ ಸೈನ್ಯವನ್ನು 1300ರ ಸುಮಾರಿನಲ್ಲಿ ಕಳುಹಿಸಿದ. ಮುಸ್ಲಿಮರ ಸೈನ್ಯ ರಣತಂಬೂರನ್ನು ತಲುಪುವ ಮೊದಲೇ ಹಮ್ಮೀರನ ದಂಡನಾಯಕನಾದ ಭೀಮಸಿಂಹ ಶತ್ರುಗಳನ್ನು ಸೋಲಿಸಿ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಪ್ರಾಣ ಬಿಟ್ಟ. ಹಮ್ಮೀರ ತನ್ನ ಶಕ್ತಿಯನ್ನು ಶೇಖರಿಸಿದ. ಮನಸ್ತಾಪದಿಂದ ರಣತಂಬೂರನ್ನು ತ್ಯಜಿಸಿದ್ದ ಹಮ್ಮೀರನ ಬಂಧುವಾದ ಭೋಜ ಆ ವೇಳೆಗೆ ಅಲ್ಲಾವುದ್ಧೀನನ ಆಶ್ರಯವನ್ನು ಪಡೆದು ರಣತಂಬೂರನ್ನು ಆಕ್ರಮಿಸಲು ಅವನಿಗೆ ಸೂಕ್ತ ಸಲಹೆ ನೀಡಿದ.

	 ಅಲ್ಲಾವುದ್ಧೀನ್ ಖಿಲ್ಜಿ ಉಲ್ಗುಖಾನ್ ಮತ್ತು ನಸರತ್‍ಖಾನ್ ಎಂಬ ತನ್ನ ಪ್ರಸಿದ್ಧ ದಳಪತಿಗಳೊಂದಿಗೆ ತಾನೇ ದೊಡ್ಡ ಸೈನ್ಯದೊಡನೆ ರಣತಂಬೂರನ್ನು ಮುತ್ತಲು ಬಂದ. ಮುಸ್ಲಿಮರ ಸೈನ್ಯ 1301ರ ಪ್ರಾರಂಭದಲ್ಲಿ ರಣತಂಬೂರಿನ ಕೋಟೆಯನ್ನು ಸಮೀಪಿಸಿ ಒಳನುಗ್ಗುಲು ಮಾಡಿದ ಪ್ರಯತ್ನ ವಿಫಲವಾಯಿತು. ಅನಂತರ ಅಲ್ಲಾವುದ್ದೀನ ಸಂಧಾನಕ್ಕೆ ಒಪ್ಪುವಂತೆ ನಟಿಸಿ, ಹಮ್ಮೀರನ ಮೆಚ್ಚಿಗೆಯ ದಳಪತಿಗಳಾದ ರತಿಪಾಲ ಮತ್ತು ರಣಮಲ್ಲ ಎಂಬುವರನ್ನು ವಿದ್ರೋಹದಿಂದ ತನ್ನ ಕಡೆಗೆ ಸೆಳೆದುಕೊಂಡ. ಹಮ್ಮೀರ ತನ್ನ ಕುಮಾರಿ ದೇವಲದೇವಿಯನ್ನು ತನಗೆ ಕೊಟ್ಟು ವಿವಾಹಮಾಡುವುದಾದರೆ ತಾನು ರಣತಂಬೂರಿನಿಮದ ಹಿಂದಿರುಗುವುದಾಗಿ ಅಲ್ಲಾವುದ್ದೀನ ಹೇಳಿ ಕಳುಹಿಸಿದ. ಇದರಿಂದ ಕುಪಿತನಾದ ಹಮ್ಮೀರ ಚೌಹರ್ ಪದ್ಧತಿಯನ್ನು ಅನುಸರಿಸುವಂತೆ ತನ್ನವರಿಗೆ ತಿಳಿಸಿದ. ಹಮ್ಮೀರನ ರಾಣಿ, ಅವನ ಕುಮಾರಿ ಮೊದಲಾಗಿ ಅನೇಕ ಮಂದಿ ಸ್ತ್ರೀಯರು ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣ ಮಾಡಿಕೊಂಡರು. ಹಮ್ಮೀರ ಜಾಜನಿಗೆ ಪಟ್ಟಿ ಕಟ್ಟಿ ವೀರಾವೇಶದಿಂದ ವೈರಿಗಳ ಮೇಲೆ ಬಿದ್ದು ಹೋರಾಡುತ್ತ ಮಡಿದ. ಅವನ ಪರಾಕ್ರಮವನ್ನೂ ಧೈರ್ಯಸ್ಥೈರ್ಯಗಳನ್ನೂ ಕಣ್ಣಾರೆ ಕಂಡ ಶತ್ರುಗಳು ಅಪ್ರತಿಭರಾದರು. ವಿದ್ರೋಹಿಗಳಾದ ರತಿಪಾಲ, ರಣಮಲ್ಲರನ್ನು ಅಲ್ಲಾವುದ್ದೀನ ಕೊಲ್ಲಿಸಿದ. ರಣತಂಬೂರು ಮಹಮ್ಮದೀಯರ ವಶವಾಯಿತು. ಹಮ್ಮೀರನ ವೀರಮರಣದೊಡನೆ ರಣತಂಬೂರಿನ ಚೌಹಾಣ ಮನೆತನದ ಆಳ್ವಿಕೆ ಕೊನೆಗೊಂಡಿತು.

	ನಾಡೋಲ್ ಶಾಖೆ : ಈ ಶಾಖೆ ಶಾಕಂಬರಿಯ ಲಾಕ್ಷಣ ಅಥವಾ ಲಕ್ಷ್ಮಣ ಎಂಬವನಿಂದ ಸ್ಥಾಪಿಸಲ್ಪಟ್ಟಿತೆಂದು ತಿಳಿದುಬರುತ್ತದೆ. ಅವನು ತನ್ನ ಪತ್ನಿ ಮತ್ತು ಒಬ್ಬ ಹರಿಜನ ಅನುಚರನೊಡನೆ ನಾಡೋಲ್‍ಗೆ ಬಂದು ತನ್ನ ಶೌರ್ಯದಿಂದಲೂ ದೈವಾನುಗ್ರಹದಿಂದಲೂ ರಾಜ್ಯ ಸ್ಥಾಪಿಸಿದನೆಂದು ಪ್ರತೀತಿ. ಅವನ ಅನಂತರ ಶೋಭಿತ, ಬಲಿರಾಜ, ವಿಗ್ರಹಪಾಲ, ಮಹೇಂದ್ರ ಇವರು ಅನುಕ್ರಮವಾಗಿ ಆಳ್ವಿಕೆ ನಡೆಸಿದರು. ಮಹೇಂದ್ರನ ಮಗನಾದ ಅಶ್ವಪಾಲ ಸು. 11ನೆಯ ಶತಮಾನದ ಪ್ರಾರಂಭದಲ್ಲಿ ಆಳುತ್ತಿದ್ದ ಅಶ್ವಪಾಲನ ಕಾಲದಲ್ಲಿ ಗುಜರಾತಿನ ಚೌಳುಕ್ಯರಿಗೂ ಚೌಹಾಣರಿಗೂ ಯುದ್ಧಗಳು ನಡೆದವು. ಅಶ್ವಪಾಲನ ಮಗನೂ ಉತ್ತರಾಧಿಕಾರಿಯೂ ಆದ ಅಣಹಿಲ ನಾಡೋಲ್ ಚೌಹಾಣ ರಾಜರಲ್ಲಿ ಅತ್ಯಂತ ಪ್ರಸಿದ್ಧನಾದವ. ಅವನು ಗುಜರಾತಿನ 2ನೆಯ ಭೀಮನನ್ನೂ ಪರಮಾರ ಭೋಜನನ್ನೂ ಮುಸ್ಲಿಂ ಸೈನ್ಯಗಳನ್ನೂ ಸೋಲಿಸಿದ. ಅವನ ಆಳ್ವಿಕೆಯಲ್ಲಿ ನಾಡೋಲ್ ರಾಜ್ಯ ಪ್ರಬಲರಾಜ್ಯಗಳಲ್ಲೊಂದೆಂದು ಪ್ರಸಿದ್ಧವಾಗಿತ್ತು. ಅಣಹಿಲನ ಮರಣಾನಂತರ ಅವನ ಪುತ್ರ ಬಾಲಪ್ರಸಾದ ರಾಜನಾದ. ಇನ್ನೂ ಬಾಲಕನಾಗಿದ್ದ ಅವನು ಗುಜರಾತಿನ ಭೀಮದೇವನಿಂದ ಪರಾಜಿತನಾದ. ಅವನ ಸಹೋದರನಾದ ಜೆಂದುರಾಜ ಸಿಂಹಾಸನಕ್ಕೆ ಬಂದ. ಜೆಂದುರಾಜ ತನ್ನ ಶತ್ರುಗಳನ್ನು ಸೋಲಿಸಿ, ಜೆಂದ್ರರಾಜೇಶ್ವರ ಎಂಬ ದೇವಾಲಯವನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಜೆಂದು ರಾಜನ ಅನಂತರ ಅವನ ಮಗನಾದ ಪೃಥ್ವೀರಾಜ ಅನೇಕ ವರ್ಷಗಳ ಕಾಲ ಬಳಿ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದ. ಅವನ ಅನಂತರ ಆಳಿದ ಅವನ ಸಹೋದರ ಜಾಜಲದೇವ 1090ರ ಸುಮಾರಿನಲ್ಲಿ ಅಣಹಿಲಪಾಟಕವನ್ನು ಆಕ್ರಮಿಸಿದ. ಜಾಜಲನ ಮರಣಾನಂತರ ಅವನ ಸಹೋದರನಾದ ಆಶರಾಜ ಸ್ವಲ್ಪ ಕಾಲ ಆಳಿದ. ಆದರೆ ಪೃಥ್ವೀಪಾಲನ ಮಗನಾದ ರತ್ನಪಾಲ 1115ರಲ್ಲಿ ತನ್ನ ಹಕ್ಕನ್ನು ಪ್ರತಿಪಾದಿಸಿ ಸಿಂಹಾಸನ ಪಡೆದ. ಅನಂತರ ರಾಯಪಾಲ, ಸಹಜಪಾಲ, ಅಹಣ, ಕೆಲ್ಹಣ, ಜಯತಸಿಂಹ- ಇವರು ಕ್ರಮವಾಗಿ ಆಳಿದರು. ಜಯತಸಿಂಹನ ಆಳ್ವಿಕೆಯಲ್ಲಿ ಕುತ್ಬ್-ಉದ್-ದೀನ್ ಐಬಕ್ ನಾಡೋಲ್ ಮೇಲೆ ಆಕ್ರಮಣ ನಡೆಸಿದ ಸಾಮಂತಸಿಂಹ ನಾಡೋಲ್ ಚೌಹಾಣ ಮನೆತನದ ಕೊನೆಯ ರಾಜ. ಅನಂತರ ಆ ರಾಜ್ಯ ಜಾಲೋರ್ ಚೌಹಾಣ ಮನೆತನದ ಉದಯಸಿಂಹನ ಆಡಳಿತಕ್ಕೆ ಒಳಪಟ್ಟಿತು.

	ಜಾಲೋರ್ ಶಾಖೆ : ನಾಡೋಲ್ ರಾಜನಾದ ಅಲ್ಹಣದೇವ ಮತ್ತು ಅನ್ನಲ್ಲದೇವಿಯ ಕುಮಾರಲ್ಲೊಬ್ಬನಾದ ಕೀರ್ತಿಪಾಲ ಜಾಲೋರ್ (ಜಾಬಾಲಿಪುರ) ಚೌಹಾಣ ಶಾಖೆಯ ಸ್ಥಾಪಕ. ಜಾಲೋರ್ ಅಥವಾ ಜಾಬಾಲಿಪುರ ಬೆಟ್ಟ ಗುಡ್ಡಗಳಿಂದಾವೃತವಾದ ದುರ್ಗಮ ಪ್ರದೇಶವಾಗಿತ್ತು. ಸುವರ್ಣಗಿರಿ ಜಾಲೋರ್ ರಾಜ್ಯದ ಮುಖ್ಯಪಟ್ಟಣಗಳಲ್ಲೊಂದಾಗಿತ್ತು. ತನ್ನ ದಕ್ಷತೆ ಮತ್ತು ಶೌರ್ಯದಿಂದ ಚಿಕ್ಕ ರಾಜ್ಯವೊಂದನ್ನು ಸ್ಥಾಪಿಸಿದ ಕೀರ್ತಿಪಾಲನ್ನು ಅನೇಕ ಕವಿಗಳು ತಮ್ಮ ಗ್ರಂಥಗಳಲ್ಲಿ ಸ್ಮರಿಸಿದ್ದಾರೆ. ಕೀರ್ತಿಪಾಲ ಸಂಪ್ರದಾಯವಾದಿ ಹಿಂದು; ಸೂರ್ಯ ಮತ್ತು ಮಹೇಶ್ವರನ ಆರಾಧಕ. ಅವನು ಮಹಾವೀರ ಜಿನಾಲಯಕ್ಕೂ ಉದಾರ ದಾನ ದತ್ತಿಗಳನ್ನು ನೀಡಿದ. ಕೀರ್ತಿಪಾಲನ ಅನಂತರ ಅವನ ಮಗನಾದ ಸಮರಸಿಂಹ ರಾಜನಾದ. ಅವನು ಸು. 1182ರ ಹಲವು ದಾನಶಾಸನಗಳು ದೊರೆತಿವೆ. ಅವನ ಸೂಂಧಾ ಶಾಸನದ ಪ್ರಕಾರ ಸಮರಸಿಂಹ ದೇವಾಲಯಗಳ ನಿರ್ಮಾಣ, ಧರ್ಮಶ್ರದ್ಧೆ, ವಿದ್ವಾಂಸ ಮತ್ತು ಜ್ಞಾನಪಕ್ಷಪಾತ ಇವುಗಳಿಗೆ ಪ್ರಸಿದ್ಧನಾಗಿದ್ದ. ಅವನು ತುಲಾಪುರುಷ, ಮಹಾದಾನವನ್ನು ಆಚರಿಸಿದ, ಜಾಲೋರ್‍ನ ಕನಕಾಚಲ ಅಥವಾ ಸುವರ್ಣಗಿರಿಗೆ ಭದ್ರವಾದ ಕೋಟೆ ನಿರ್ಮಿಸಿ ಅದನ್ನು ಅಭೇದ್ಯ ಸ್ಥಳವನ್ನಾಗಿ ಮಾಡಿದ. ಅವನು ಒಂದು ಹೊಸ ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಸಮರಪುರ ಎಂದು ಹೆಸರಿಟ್ಟ. ಅವನ ಸಹೋದರಿಯಾದ ರೂದಲದೇವಿ ರಾಜಧಾನಿಯಲ್ಲಿ ಎರಡು ಶಿವಾಲಯಗಳನ್ನು ಕಟ್ಟಿಸಿದಳು. ಅಲ್ಲಿಯ ಕುನ್ವರ ವಿಹಾರ ರಾಜನ ಇಷ್ಟದಂತೆ ಪುನರ್‍ನಿರ್ಮಾಣವಾಯಿತು. ಅವನು ತನ್ನ ಕುಮಾರಿಯಾದ ಲೀಲಾದೇವಿಯನ್ನು ಗುಜರಾತಿನ ಇಮ್ಮಡಿ ಭೀಮದೇವನಿಗೆ ಕೊಟ್ಟು ವಿವಾಹ ಮಾಡಿದ್ದ. ಅವನ ಆಳ್ವಿಕೆಯಲ್ಲಿ ರಾಜ್ಯ ಶಾಂತಿ ಸುಭಿಕ್ಷೆಗಳಿಂದ ಕೂಡಿತ್ತು.

	ಸಮರಸಿಂಹನ ಅನಂತರ ಅವನ ಮಗ ಉದಯಸಿಂಹ ಜಾಲೋರ್ ಸಂಸ್ಥಾನದ ರಾಜನಾದ. 1205ರಿಂದ 1249ರವರೆಗೆ ಅವನು ಕೊಟ್ಟ ದಾನಗಳಿಗೆ ಸಂಬಂಧಿಸಿದ ಶಾಸನಗಳು ದೊರೆತಿವೆ. ಪರಾಕ್ರಮಿಯಾದ ಉದಯಸಿಂಹ ನಾಡ್ಡುಲ, ಜಾಬಾಲಿಪುರ, ಮಾಂಡವಯ್ಪುರ ವಾಲ್ಫಟಮೇರು, ಶ್ರೀಮಲ, ರತ್ನಪುರ ಮೊದಲಾದ ಪ್ರದೇಶಗಳ ಮೇಲೆ ತನ್ನ ಆಳ್ವಿಕೆ ಸ್ಥಾಪಿಸಿ ರಾಜ್ಯವನ್ನು ವಿಸ್ತರಿಸಿದ. ಅವನ ರಾಜ್ಯ ಮಂದರ್‍ನಿಂದ ಸಾಂಚರ್‍ರವರೆಗೂ ಮಲ್ಲನಿಯಿಂದ ಗದ್ವಾರ್‍ವರೆಗೂ ವಿಸ್ತರಿಸಿತ್ತು. 1226ರ ವೇಳೆಗೆ ಅವನು ನಾಡೋಲ್ ರಾಜ್ಯವನ್ನು ವಶಪಡಿಸಿಕೊಂಡ. ಉದಯಸಿಂಹನ ಪ್ರಭಾವವನ್ನು ಮುರಿಯಲು 1216ರಲ್ಲಿ ಅಲ್ತಮಿಷ್ ದೊಡ್ಡ ಸೈನ್ಯವೊಂದನ್ನು ಕಳುಹಿಸಿದ. ಉದಯಸಿಂಹ ಶತ್ರುಸೈನ್ಯವನ್ನು ಎದುರಿಸಿ ಶೌರ್ಯದಿಂದ ಹೋರಾಡಿ ಪರಾಭವ ಹೊಂದಿದ. ಅಲ್ತಮಿಷ್ ಅವನ ಶೌರ್ಯಕ್ಕೆ ಮಾರುಹೋಗಿ ಅವನ ಸ್ನೇಹವನ್ನು ಬಯಸಿ ಅವನ ರಾಜ್ಯವನ್ನು ಬಿಟ್ಟುಕೊಟ್ಟ. ಅನಂತರ ಅಲ್ತಮಿಷ್ ಗುಜರಾತನ್ನು ಮುತ್ತಿದ. ಉದಯಸಿಂಹ ಗುಜರಾತಿನ ವಾಘೇಲ ವೀರಧವಳನ ಸಹಾಯಕ್ಕೆ ಧಾವಿಸಿ ಮುಸ್ಲಿಮರ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದ. ಉದಯಸಿಂಹ ತನ್ನ ಕುಮಾರಿಯನ್ನು ವಾಘೇಲ ರಾಜನಿಗೆ ಕೊಟ್ಟು ವಿವಾಹ ಮಾಡಿದ. ಅವನು ವೀರನಾಗಿದ್ದಂತೆ ಜ್ಞಾನಪಕ್ಷಪಾತಿಯಾಗಿದ್ದ; ಸಂಗೀತ ನೃತ್ಯಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ. ಉದಯಸಿಂಹನ ಮರಣಾನಂತರ ಅವನ ಮಗನಾದ ಚಾಚಿಲ ರಾಜನಾದ. ಚಾಚಿಲನೂ ತಂದೆಯಂತೆ ಪರಾಕ್ರಮಿಯಾಗಿದ್ದ. ಅವನು ಗುಜರಾತಿನ ವೀರಮದೇವನನ್ನೂ ಇತರ ರಾಜರನ್ನೂ ಸೋಲಿಸಿದ. ಚಾಚಿಲನ ಅನಂತರ 1277ರಲ್ಲಿ ಅವನ ಮಗ ಸಾಮಂತಸಿಂಹ ರಾಜನಾದ. ಸಾಮಂತಸಿಂಹನ ಮಗನಾದ ಕಾನ್ಹಡ ಜಾಲೋರ್ ರಾಜ್ಯದ ಕೊನೆಯ ರಾಜ. 1311ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಜಾಲೋರ್ ರಾಜ್ಯವನ್ನು ಮುತ್ತಿ ಕಾನ್ಹಡ ಮತ್ತು ಅವನ ಮಗ ವೀರಮನನ್ನು ಕೊಂದು ಜಾಲೋಡ್ ರಾಜ್ಯವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ.				(ಜಿ.ಆರ್.ಆರ್.)

	ಇತರ ಶಾಖೆಗಳು: 9ನೆಯ ಶತಮಾನದಲ್ಲಿ ಧೋಲ್‍ಪುರದ ಸುತ್ತಲೂ ಪ್ರತೀಹಾರರ ಮಾಂಡಲಿಕರಾಗಿ ಚಾಹಮಾನದ ಒಂದು ಶಾಖೆಯವರು ಆಳುತ್ತಿದ್ದರು. ಈ ಮನೆತನದ ಮೂವರ ಹೆಸರುಗಳು ತಿಳಿದಿವೆ; ಈಸುಕ್, ಆತನ ಮಗ ಮಹಿಷರಾಮ, ಮೊಮ್ಮಗ ಚಂಡಮಹಾಸೇನ. ಚಂಡಮಹಾಸೇನ ಧವಳಪುರಿಯಲ್ಲಿ (ಧೋಲ್‍ಪುರ) 842ರಲ್ಲಿ ಆಳುತ್ತಿದ್ದ. ಚರ್ಮಣ್ವತೀ-ಚಂಬಲ್-ನದೀತೀರದಲ್ಲಿ ನೆಲಸಿದ್ದ. ಮ್ಲೇಚ್ಛರು ಇವನ ಅಧೀನರಾಗಿದ್ದರೆಂದು ಈತ ಹೇಳಿಕೊಂಡಿದ್ದಾನೆ. ಧವಳಪುರಿಯ ದೇವಾಲಯವನ್ನು ಈತ ಕಟ್ಟಿಸಿದ. ಇವನ ಅನಂತರ ಆಳಿದ ಇತರರ ಬಗ್ಗೆ ಏನೂ ತಿಳಿಯದು.

	ಪರ್ತಾಬ್‍ಗಢದಲ್ಲಿ ಚಾಹಮಾನರ ಇನ್ನೊಂದು ಮಾಂಡಲಿಕ ಮನೆತನ ಅಧಿಕಾರದಲ್ಲಿತ್ತು. ಗೋವಿಂದರಾಜ, ದುರ್ಲಭರಾಜ ಮತ್ತು ಮಹಾಸಾಮಂತ ಇಂದ್ರರಾಜರು ಈ ಶಾಖೆಗೆ ಸೇರಿದವರು. 942ರಲ್ಲಿ ಸುಮಾರಿಗೆ ಇಂದ್ರರಾಜ ಗೊಣ್ವ ವರ್ಷಕಾ (ಪರ್ತಾಬ್‍ಗಢ ಸಮೀಪದ ಪೊಟರ್ಸಿ) ಗ್ರಾಮದಲ್ಲಿ ಸೂರ್ಯದೇವಾಲಯವೊಂದನ್ನು ಕಟ್ಟಿಸಿದ.

	ಸತ್ಯಪುರ (ಜೋಧಪುರದ ಸಮೀಪದ ಸಾಮಚೋರ್) ಮತ್ತು ದೇವಡಾಗಳಲ್ಲಿ 13ನೆಯ ಶತಮಾನದಲ್ಲಿ ಮತ್ತು ಅನಂತರ ಚಾಹಮಾನ ಮನೆತನದ ಭಿನ್ನ ಶಾಖೆಗಳವರು ಅಧಿಕಾರದಲ್ಲಿದ್ದರು. ನಾಡೋಲ್ ಚಾಹಮಾನನಾದ ಅಲ್ಹಣನ ಮಗ ವಿಜಯಸಿಂಹ ಸತ್ಯಪುರವನ್ನು ಸ್ಥಾಪಿಸಿದ. ಈತನೂ ತದನಂತರ ಬಂದ ಪದ್ಮಸಿಂಹ, ಶೋಭಿತ ಮತ್ತು ಸಾಲ್ಹ ಇವರೂ ಜಾಲೋರ್ ಚಾಹಮಾನರ ಸಾಮಂತರಾಗಿದ್ದರು. ಸಾಲ್ಹ ಭಾನ್ ಮಲ್ ನಗರವನ್ನು ಮುಸ್ಲಿಮರಿಂದ ಕಸಿದುಕೊಂಡನೆಂದು ಹೇಳಿದೆ. ಈತನ ಅನಂತರ ವಿಕ್ರಮಸಿಂಹ, ಸಂಗ್ರಾಮಸಿಂಹ ಮತ್ತು ಪ್ರತಾಪ ಸಿಂಹರು ಅನುಕ್ರಮವಾಗಿ ಆಳಿದರು.

	ದೇವಡಾ ಶಾಖೆಯ ಮೂಲಪುರುಷ ವಿಜಡ ಅಥವಾ ದೇವರಾಜ; ಜಾಲೋರದ ಜಾಹಮಾನ ಸಮರಸಿಂಹನ ಮರಿಮಗ; ಮಾನಸಿಂಹ ಮೊಮ್ಮಗ; ಪ್ರತಾಪನ ಮಗ, ಈತನಿಂದಲೇ ಈ ಶಾಖೆಗೆ ದೇವಡಾ (ದೇವರಾಜ) ಎಂಬ ಹೆಸರು ಬಂತು. ಮರುಸ್ಥಳೀ ಮಂಡಲದ ಅಧಿಪನೆಂದು ಈತನನ್ನು ವರ್ಣಿಸಲಾಗಿದೆ. ಈತನ ಮಗ ವಾಣಿಗ (ಲಾವಣ್ಯಕರ್ಣ) ಆಬು ಪರ್ವತವನ್ನೂ ವಾಘೇಲರಿಂದ ಕಸಿದುಕೊಂಡ. ವಾಣಿಗನ ಅನಂತರ ಅವನ ತಮ್ಮ ಉಣ್ಟಿಗ (ಉಣ್ದ) 1315ರಿಂದ 1320ರ ವರೆಗೂ ಅನಂತರ ವಾಣಿಗನ ಮಗ ತೇಜಸಿಂಹ ಸು. 1337ರವರೆಗೂ ಆಳಿದರು. 1337ರಲ್ಲಿ ತೇಜಸಿಂಹನ ಮಗ ಕಾನ್ಹಡದೇವ ಅಧಿಕಾರಕ್ಕೆ ಬಂದ. ಈತನೇ ಈ ಮನೆತನದ ಕೊನೆಯ ಅರಸ.
(ಜಿ.ಬಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ